ಬನವಾಸಿ -
	ಶಿರಸಿ ತಾಲ್ಲೂಕಿನ ಒಂದು ಇತಿಹಾಸ ಪ್ರಸಿದ್ಧ ಗ್ರಾಮ. ಕಸಭೆಯಿಂದ ಆಗ್ನೇಯಕ್ಕೆ ಸುಮಾರು 22 ಕಿಮೀ ದೂರದಲ್ಲಿ ವರದಾನದಿಯ ಎಡದಂಡೆಯ ಮೇಲಿದೆ.

	ರಾಜಕೀಯ ಮತ್ತು ಸಾಂಸ್ಕøತಿಕ ದೃಷ್ಟಿಯಿಂದ ಬನವಾಸಿ ಪ್ರಾಮುಖ್ಯ ಪಡೆದಿತ್ತು. ಪಾಂಡವರು ತಮ್ಮ ವನವಾಸದ ಕೆಲಕಾಲ ಇಲ್ಲೆ ಕಳೆದರೆಂದೂ ಧರ್ಮ ರಾಜನ ಅಶ್ವಮೇಧ ಯಾಗದ ಸಂದರ್ಭದಲ್ಲಿ ಸಹದೇವ ದಕ್ಷಿಣ ಭಾರತದ ದಿಗ್ವಿಜಯ ಕಾಲದಲ್ಲಿ ವನವಾಸಿಕಾ ಎಂದರೆ ಬಲವಾಸಿ ಅಥವಾ ಸಂಜಯಂತಿ ನಗರವನ್ನು ಗೆದ್ದನೆಂದೂ ಮಹಾಭಾರತದಲ್ಲಿ ಉಲ್ಲೇಖವಿದೆ. ಪೌರಾಣಿಕ ಯುಗದಲ್ಲಿ ವೈಜಯಂತಿ ಎಂದು ಹೆಸರಾದ ಈ ನಗರದಲ್ಲಿ ಮಧು-ಕೈಟಭರೆಂಬ ದೈತರನ್ನು ವಿಷ್ಣು ಕೊಂದನಂತೆ. ಶಿವಭಕ್ತರಾದ ಈ ದೈತ್ಯರ ಹೆಸರಿನಲ್ಲಿ ಬನವಾಸಿಯಲ್ಲಿ ಮಧುಕೇಶ್ವರ ಮತ್ತು ನದಿಯ ಇನ್ನೊಂದು ದಂಡೆಯಲ್ಲಿರುವ ಅನವಟ್ಟಿ ಅಥವಾ ಮಧುಕೇಶ್ವರ ಮತ್ತು ನದಿಯ ಇನ್ನೊಂದು ದಂಡೆಯಲ್ಲಿರುವ ಅವನಟ್ಟಿ ಅಥವಾ ಕುಪ್ಪತ್ತೂರಿನಲ್ಲಿ ಕೈಟಭೇಶ್ವರ ದೇವಾಲಯಗಳನ್ನು ನಿರ್ಮಿಸಲಾಯಿತೆಂದು ಹೇಳಲಾಗಿದ್ದರೂ ಈಗಿರುವಂತೆ ಆ ದೇವಾಲಯಗಳು ಅನಂತರ ಕಾಲದವು. ಬೌದ್ಧ ಧರ್ಮ ಪ್ರಸಾರಕ್ಕಾಗಿ ಅಶೋಕ ಕಳಿಸಿದ ಬೌದ್ಧ ಭಿಕ್ಷು ರಖ್ಖಿತ ಬನವಾಸಿ ಪ್ರಾಂತ್ಯಕ್ಕೆ ಬಂದಿದ್ದನೆಂದೂ ಶ್ರೀಲಂಕೆಯ ದುಟ್ಟಗಾಮಣಿ (ಕ್ರಿ.ಪೂ. 1ನೆಯ ಶತಮಾನ) ಅರಸ ಅನುರಾಧಪುರದಲ್ಲಿ ನಿರ್ಮಿಸಿದ ಸ್ತೂಪದ ಪ್ರತಿಷ್ಠಾಪನ ಮಹೋತ್ಸವದಲ್ಲಿ ಭಾಗವಹಿಸಲು ಬನವಾಸಿಯ ಮಹಾಥೇರ ಚಂದ್ರಗುಪ್ತ 80 000 ಭಿಕ್ಷುಗಳೊಂದಿಗೆ ಸಿಂಹಳಕ್ಕೆ ಹೋಗಿದ್ದನೆಂದೂ ಸಿಂಹಳದ ಮಹಾವಂಸ ಗ್ರಂಥದಿಂದ ತಿಳಿದು ಬರುವುದು. ನಾಗಾರ್ಜುನ ಕೊಂಡದ ಒಂದು ಶಾಸನದಂತೆ ಸಿಂಹಳದ ಬೌದ್ಧ ಭಿಕ್ಷುಗಳು ಧರ್ಮ ಪ್ರಸಾಕ್ಕಾಗಿ ಬನವಾಸಿಗೆ ಬಂದಿದ್ದರು. ಕ್ರಿಶ 1ನೆಯ ಶತಮಾನದಲ್ಲಿ ಭಾರತಕ್ಕೆ ಬಂದಿದ್ದ ಗ್ರೀಕ್ ಭೂಗೋಳ ಶಾಸ್ತ್ರಜ್ಞ ಟಾಲೆಮಿ ಈ ನಗರವನ್ನು 'ಬನೌಸಿ ಯೆಂದು ಕರೆದಿದ್ದಾನೆ.

	ಸಾತವಾಹನರ ಕಾಲದಿಂದಾಚೆಗೆ ಬನವಾಸಿಗೆ ಸಂಬಂಧಿಸಿದ ಹೆಚ್ಚಿನ ಐತಿಹಾಸಿಕ ದಾಖಲೆಗಳು ದೊರಕುತ್ತವೆ. ಬನವಾಸಿ ಗೌತಮೀ ಪುತ್ರ ಸಾತಕರ್ಣಿಯ ನೇರ ಆಡಳಿತಕ್ಕೆ ಸೇರಿದ್ದು. ಅವನು ತನ್ನ ಸೈನ್ಯದೊಡನೆ ವಿಜಯ ವೈಜಯಂತಿಯಲ್ಲಿ ಬೀಡುಬಿಟ್ಟಿದ್ದನೆಂದು ನಾಸಿಕದ ಶಾಸನ ತಿಳಿಸುತ್ತದೆ. 

ಚಿತ್ರ-1

ಬನವಾಸಿಯ ವರ್ತಕ ಭೂತ ಪಾಲಶೆಟ್ಟಿ ಪುಣೆ ಜಿಲ್ಲೆಯ ಕಾರ್ಲೆಯಲ್ಲಿ ಒಂದು ಚೈತ್ಯಾಲಯವನ್ನು ಕಲ್ಲಿನಲ್ಲಿ ಕಡೆಸಿದನೆಂದು ಒಂದು ಶಾಸನ ತಿಳಿಸುತ್ತದೆ. ಈಚೆಗೆ ಬನವಾಸಿಯಲ್ಲಿ ದೊರಕಿದ ಸಾತವಾಹನ ದೊರೆ ವಾಸಿಷ್ಠೀ ಪುತ್ರ ಸಿವಸಿರಿ ಪುಳುಮಾವಿಯ ಅನಂತರ ಬಂದ (ಕ್ರಿ.ಶ. 2ನೆಯ ಶತಮಾನ) ಶಿವಶ್ರೀ ಪುಳುಮಾವಿಯ ಶಾಸನ ಅವನ ರಾಣಿಯ ಸ್ಮಾರಕಶಿಲೆ ಯಾಗಿದ್ದು ಆ ಕಾಲದಲ್ಲಿ ಬನವಾಸಿಯ ಪ್ರಾಮುಖ್ಯವನ್ನು ಸೂಚಿಸುತ್ತದೆ. ಮುಂದೆ ಸಾತವಾಹನರ ಸಾಮಂತರೂ ಆ ವಂಶದ ಶಾಖೆಗೆ ಸೇರಿದವರೂ ಆದ ಚಟುಸಾತಕರ್ಣಿ ದೊರೆಗಳ ಕಾಲದಲ್ಲೂ ಬನವಾಸಿ ಪ್ರಮುಖ ನಗರವಾಗಿತ್ತು. 

ಚಿತ್ರ-2

ಆ ವಂಶದ ವಿಣ್ಹುಕಡ ಚುಟುಕುಲಾನಂದ ಸಾತಕರ್ಣೆಯ 12ನೆಯ ವರ್ಷದ ಆಳ್ವಿಕೆಯಲ್ಲಿ ಇವನ ಮಗಳು ಶಿವಸ್ಕಂಧ ನಾಗಶ್ರೀ ನಾಗಪ್ರತಿಮೆಯನ್ನು ಮಾಡಿಸಿ ಒಂದು ಕೆರೆಯನ್ನು ಕಟ್ಟಿಸಿ ವಿಹಾರವೊಂದನ್ನು ಸ್ಥಾಪಿಸಿದಳೆಂದು ಬನವಾಸಿಯಲ್ಲಿರುವ ನಾಗಪ್ರತಿಮೆ ಶಾಸನದಲ್ಲಿ ಹೇಳಿದೆ. 4ನೆಯ ಶತಮಾನದಲ್ಲಿ ಕದಂಬ ರಾಜ್ಯಸ್ಥಾಪನೆಯಾದಾಗ ಬನವಾಸಿ ಅವರ ರಾಜಧಾನಿಯಾಗಿ ಪ್ರಸಿದ್ಧವಾಯಿತು.

ಚಿತ್ರ-3

 7ನೆಯ ಶತಮಾನದಲ್ಲಿ ಇಮ್ಮಡಿ ಪುಲಿಕೇಶಿಯ ಆಕ್ರಮಣಕ್ಕೊಳಗಾದ ನಂತರ ಇದರ ಸ್ಥಿತಿಯಲ್ಲಿ ಬದಲಾವಣೆಯುಂಟಾದರೂ ಅನುಕ್ರಮವಾಗಿ ಬಾದಾಮಿ ಚಾಲುಕ್ಯ, ರಾಷ್ಟ್ರಕೂಟ, ಕಲ್ಯಾಣಿ ಚಾಲುಕ್ಯ, ಹೊಯ್ಸಳ, ಸೇವುಣ, ಕಳುಚುರಿ ಮತ್ತು ವಿಜಯನಗರ ಸಾಮ್ರಾಜ್ಯಗಳ ಕಾಲದಲ್ಲಿ ತನ್ನ ರಾಜಕೀಯ ಪ್ರಾದಾನ್ಯ ಉಳಿಸಿಕೊಂಡು ಬಂತು. ಬಾದಾಮಿ ಚಾಲುಕ್ಯರ ಸಾಮಂತರ ಮುಖ್ಯ ಪಟ್ಟಣವಾದ ಬನವಾಸಿಯಲ್ಲಿ ವಿನಯಾದಿತ್ಯನ ಪುತ್ರಿ ಕುಂಕುಮ ಮಾದೇವಿಯ ಪತಿ ಆಳುಪ ವಂಶದ ಚಿತ್ರವಾಹನ ಬನವಾಸಿಯನ್ನು ರಾಜಧಾನಿ ಮಾಡಿಕೊಂಡು ಆಳುತ್ತಿದ್ದ. ಚಾಳುಕ್ಯ-ರಾಷ್ಟ್ರಕೂಟದ ಆಡಳಿತ ಕಾಲದಲ್ಲಿ ತುಂಗಭದ್ರೆಯಿಂದ ವರದಾನದಿವರೆಗಿನ ಬಯಲನ್ನೊಳಗೊಂಡ ಬನವಾಸಿ ಪನ್ನಿಚ್ರ್ಛಾಸಿರ ಒಂದು ಪ್ರಮುಖ ಪ್ರಾಂತ್ಯವಾಗಿತ್ತು. ಹಾನಗಲ್ಲು ಕದಂಬರ ಕಾಲದಲ್ಲಿ ಪ್ರಮುಖ ಕೇಂದ್ರವಾಗಿದ್ದ ಬಸವಾಸಿಯಲ್ಲಿ ಕಲ್ಯಾಣಚಾಳುಕ್ಯ ಯುವರಾಜ ಭುವನೈಕಮಲ್ಲ ಸೋಮೆಶ್ವರ, ಆರನೆಯ ವಿಕ್ರಮಾದಿತ್ಯ ಮತ್ತು ಜಯಸಿಂಹ ಪ್ರಾಂತ್ಯಾಧಿಕಾರಿಗಳಾಗಿದ್ದರು. ವಿಜಯನಗರ ಕಾಲದಲ್ಲಿ ಬನವಾಸಿ ಆ ಸಾಮ್ರಾಜ್ಯದ ಒಂದು ಪ್ರಮುಖ ಪ್ರಾಂತ್ಯವಾಗಿತ್ತು. ಸಂಗಮವಂಶದ ದೊರೆಗಳ ಕಾಲದಲ್ಲಿ ಅವರ ಅಧೀನನಾದ ಚೌಂಡ ಮಾಧವ ಬನವಾಸಿ ಪ್ರಾಂತ್ಯದ ಅಧಿಕಾರಿಯಾಗಿದ್ದ. ಅನಂತರ ಬೀಳಗಿ ಅರಸರು, ಸ್ವಾದಿದೊರೆಗಳು ಆ ಪ್ರದೇಶದ ಮೇಲೆ ಅಧಿಕಾರ ಪಡೆದಿದ್ದರು. ಸ್ವಾದಿ ಮನೆತನದ ಅರಸಪ್ಪ ನಾಯಕ, ರಘುನಾಥ ನಾಯಕಮಧುಕೇಶ್ವರ ದೇವರಿಗೆ ದಾನ ದತ್ತಿ ನೀಡಿದರು 17ನೆಯ ಶತಮಾನದಿಂದ ಬನವಾಸಿ ಕ್ಷೀಣಗತಿಗಿಳಿಯಿತು.

	ಬನವಾಸಿಯಲ್ಲಿ 1969-72ರ ನಡುವೆ ಮೈಸೂರು ವಿಶ್ವವಿದ್ಯಾವಿಲಯದ ಪುರಾತತ್ವ ಮತ್ತು ಪ್ರಾಚೀನ ಇತಿಹಾಸ ವಿಭಾಗದವರು ರಾಜ್ಯ ಪುರಾತತ್ವ ಇಲಾಖೆಯವರು ಸಹಕಾರದಿಂದ ನಡೆಸಿದ ಉತ್ಖನನದ ಒಂದು ನೆಲೆಯಲ್ಲಿ ಸಾತವಾಹನರ ಕಾಲದ ಒಂದು ದೇವ ಮಂದಿರದ ತಳದಲ್ಲಿ ಅದಕ್ಕೂ ಮೊದಲಿನದಾದ ಮತ್ತೊಂದು ಸುಟ್ಟ ಇಟ್ಟಿಗೆ ಕಟ್ಟಡದ ಅವಶೇಷಗಳು ಕಂಡುಬಂದಿವೆ. ಆ ಕಟ್ಟಡದ ಅವಶೇಷಗಳನ್ನೂ ಸಾತವಾಹನರ ಆದಿಕಾಲ ಅಥವಾ ಅದಕ್ಕೂ ಹಿಂದಿನ ಮೌರ್ಯರ ಕಾಲದ ಅವಶೇಷಗಳಿರಬಹುದೆಂದು ಅದೇ ಕಟ್ಟಡದ ಆಸ್ತಿಭಾರದ ಕೆಳಗಿದ್ದ ಗುಂಡಿಯೊಂದರಲ್ಲಿ ದೊರೆತ ಕೆಲವು ವಸ್ತುಗಳು ಸಹ ಮೌರ್ಯರ ಕಾಲಕ್ಕೆ ಸೇರಿದವುಗಳದ್ದಿರಬಹುದೆಂದು ಉತ್ಖನನಕಾರರು ಭಾವಿಸಿದ್ದಾರೆ. 7ನೆಯ ಶತಮಾನದಲ್ಲಿ ದಕ್ಷಿಣ ಭಾರತಕ್ಕೆ ಬಂದಿದ್ದ ಚೀನಿಯಾತ್ರಿಕ ಹ್ಯೂಎನ್‍ತ್ಸಾಂಗ್ ಅಶೋಕನ ಕಾಲದಲ್ಲಿ ಬನವಾಸಿ ಪ್ರಖ್ಯಾತ ನಗರವಾಗಿದ್ದು ಅಶೋಕ ಕಟ್ಟಿಸಿದ ಬೌದ್ಧ ನಿರ್ಮಾಣಗಳು ಅಲ್ಲಿದ್ದುವೆಂದು ಹೇಳಿದ್ದಾನೆ. ಹಾಗೆಯೇ ಅಲ್ಲಿ ದೊರೆತ ಮೂರ್ತಿಗಳು, ಮಣ್ಣಿನ ಮಡಿಕೆ ಚೂರುಗಳೂ, ನಾಣ್ಯಗಳು ಬೊಂಬೆಗಳು ಮತ್ತು ಇತರ ವಿವಿಧ ಅವಶೇಷಗಳು ಆಗಿನ ಜನರ ಆಚಾರ ವಿಚಾರ, ಅವರ ಆರ್ಥಿಕ ಪರಿಸ್ಥಿತಿ, ಕಲಾಪ್ರಿಯತೆ ಮುಂತಾದವುಗಳ ಮೇಲೆ ಬೆಳಕು ಚೆಲ್ಲುತ್ತದೆ. ಜೊಗೆತೆ ಬನವಾಸಿ ಕ್ರಿ.ಪೂ. 3ನೆಯ ಶತಮಾನದಿಂದ ಕ್ರಿ.ಶ. 3ನೆಯ ಶತಮಾನದ ತನಕ ಒಂದು ಪ್ರಮುಖ ಧಾರ್ಮಿಕ, ಸಾಂಸ್ಕøತಿಕ ಮತ್ತು ವಾಣಿಜ್ಯ ಕೇಂದ್ರವಾಗಿದ್ದು, ಕರ್ನಾಟಕ ಮಾತ್ರವಲ್ಲದೆ, ಭಾರತದ ಇತರ ಪ್ರದೇಶಗಳ ಮತ್ತು ವಿದೇಶಿಯರ ಗಮನವನ್ನೂ ಸೆಳೆದಿತ್ತು ಎಂದು ಹೇಳಬಹುದು.

	ಪ್ರಾಚೀನ ನಗರದ ನೆಲೆಯ ಸುತ್ತಲು ಇರುವ ಸುಟ್ಟ ಇಟ್ಟಿಗೆಗಳ ಕೋಟೆ ಬಹುಶಃ ಶಾತವಾಹನರ ಕಾಲದಲ್ಲಿ ನಿರ್ಮಿತವಾಗಿದೆ. ಕೋಟೆಯ ಸುತ್ತ ಆಳವಾದ ಕಂದಕವಿದೆ. ಬಳಿಯ ವರದಾನದಿಯಿಂದ ಅಗೆದ ಕಾಲುವೆಗಳಿಂದ ಕಂದಕಕ್ಕೆ ಒದಸಲಾಗುತ್ತಿತ್ತು. ಇದಲ್ಲದೆ ಮತ್ತೊಂದು ಹೊರಕೋಟೆಯಿದ್ದ ಮಾಹಿತಿಗಳು ಕಂಡುಬರುತ್ತವೆ. ಉತ್ಖನನಗಳಲ್ಲಿ ಕಂಡುಬಂದ ಎರಡು ಇಟ್ಟಿಗೆ ಕಟ್ಟಡಗಳು ಸಾತವಾಹನರ ಕಾಲದ ನಿರ್ಮಾಣಗಳಲ್ಲಿ ಪ್ರಮುಖವಾದವು. ಊರಿನ ಹೊರ ವಲಯದಲ್ಲಿ ವರದಾನದಿಯ ದಂಡೆಯಲ್ಲಿರುವ ದೋಣಿಗುಡ್ಡವೆಂಬ ದಿಬ್ಬವನ್ನು ಅಗೆದಾಗ ಬಲು ಮಟ್ಟಿಗೆ ಹಾಳಾದ ವಿಶಾಲವಾದ ಗಜಪೃಷ್ಠಾಕೃತಿಯ ಕಟ್ಟಡಗಳು ಅವಶೇಷಗಳು ಕಂಡು ಬಂದವು. ಇದೇ ನೆಲೆಯಲ್ಲಿ ಕಂಡುಬಂದ ಮತ್ತೊಂದು ದೇವಗೃಹ ಹೆಚ್ಚು ಸುರಕ್ಷಿತ ಸ್ಥಿತಿಯಲ್ಲಿತ್ತು. ಇದು ಆ ಕಾಲದ ವಾಸ್ತುಪದ್ಧತಿಯ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನೀಡುತ್ತದೆ. ಅವಶೇಷಗಳಲ್ಲಿ ಸಿಕ್ಕಿದ ಕಲ್ಲಿನ ಸ್ಕಂದ ಮೂರ್ತಿ ಮತ್ತು ಹಲವು ನಾಣ್ಯಗಳು ಕ್ರಿಶ. ಎರಡನೆಯ ಶತಮಾನದವಾಗಿದ್ದು ಆ ಕಟ್ಟಡದ ಕಾಲವನ್ನು ಸೂಚಿಸುತ್ತವೆ.

	ಈಗಿನ ಗ್ರಾಮದೊಳಗೆ, ವರದಾನದಿಯಿಂದ ಅನತಿದೂರದಲ್ಲಿರುವ ಮಧುಕೇಶ್ವರಾಲಯ ಇಲ್ಲಿಯ ವಾಸ್ತು ನಿರ್ಮಾಣಗಳಲ್ಲಿ ಪ್ರಮುಖವಾದುದು. ಇದು ಕದಂಬ, ಬಾದಾಮಿ ಚಾಳುಕ್ಯ, ರಾಷ್ಟ್ರಕೂಟ, ಕಲ್ಯಾಣ ಚಾಳುಕ್ಯ, ವಿಜಯನಗರ ಮತ್ತು ಸೋದೆ ದೊರೆಗಳ ಕಾಲದ ಸಂಕೀರ್ಣವಾಗಿದೆ. ಇದೇ ಆವರಣದಲ್ಲಿರುವ ಸದಾಶಿವ ಮಂದಿರ ವಿಜಯನಗರದ ಅರಸರ ಕಾಣಿಕೆ.

	ಮಧುಕೇಶ್ವರಾಲಯದ ಹೊರಭಾಗದಲ್ಲಿ ದಕ್ಷಿಣ ಬದಿಯಲ್ಲಿರುವ ಪಾಳುಬಿದ್ದ ಕದಂಬೇಶ್ವರ ಗುಡಿ ರೇಖಾ ನಾಗರ ಶೈಲಿಯ ಶಿಖರದಿಂದೊಡಗೂಡಿದ್ದು ಬಹುಶಃ ಕದಂಬ ಚಾಳುಕ್ಯರ ಕಾಲದ್ದಾಗಿರಬಹುದು. ಮಧುಕೇಶ್ವರಾಲಯದಿಂದ ಒಂದು ಕಿ.ಮೀ. ದೂರದಲ್ಲಿ ಕೋಟೆಯಿಂದ ಹೊರಗಿರುವ ಆದಿಮಧುಕೇಶ್ವರ ಗುಡಿಯಲ್ಲಿ ಕೆಲವು ಕದಂಬ ಚಾಳುಕ್ಯ ಶೈಲಿಯ ಅಂಶಗಳಿದ್ದರೆ ಮುಖ ಮಂಟಪದಲ್ಲಿ ಹೊಯ್ಸಳ ಮತ್ತು ವಿಜಯನಗರ ಕಾಲಗಳ ಲಕ್ಷಣಗಳಿವೆ. ಅದರ ಬಳಿಯಿರುವ ವಿಶಿಷ್ಟ ತೀರ್ಥ ಒಂದು ವಿಜಯನಗರ ಕಾಲದ ನಿರ್ಮಾಣ. ಮಧುಕೇಶ್ವರ ಮಂದಿರ ಕೋಟೆಯೊಳಗಿದ್ದು ರಾಜ-ಶ್ರೀಮಂತ ವರ್ಗದವರ ಪೂಜಾಮಂದಿರವಾಗಿದ್ದರೆ, ಊರಿನ ಹೊರವಲಯದಲ್ಲಿದ್ದ ಆದಿ ಮಧುಕೇಶ್ವರ ಸಾಮಾನ್ಯ ಜನರ ಪೂಜಾಸ್ಥಳವಾಗಿದ್ದಿರಬಹುದು. ಮಧುಕೇಶ್ವರ ದೇವಾಲಯದ ಬಳಿಯಿರುವ ವೀರಭದ್ರಗುಡಿ ಸುಮಾರು 14ನೆಯ ಶತಮಾನದ ನಿರ್ಮಾಣ. ಇವಲ್ಲದೆ ಬನವಾಸಿಯಲ್ಲಿ ಕಲ್ಯಾಣ ಚಾಳುಕ್ಯ. ವಿಜಯನಗರ ಸಾಮ್ರಾಜ್ಯ ಕಾಲಗಳಿಗೆ ಸೇರಿದ ಕೆಲವು ಜೈನ, ವೀರಶೈವ ಗುಡಿಗಳು, ಮಠಗಳು ಇವೆ.

	ಇತ್ತೀಚೆಗೆ ಗುರ್ತಿಸಲಾದ ಗುಡ್ನಾಪುರದ ರವಿವರ್ಮನ ಶಾಸನದ ಪ್ರಕಾರ ಈಗಿನ ಗುಡ್ನಾಪುರ ಪ್ರಾಚೀನ ಬನವಾಸಿ ನಗರದ ಭಾಗವಾಗಿತ್ತು. ಅಲ್ಲೊಂದು ಕಾಮಜಿನಾಲಯ ಅಥವ ಕಾಮದೇವ ಮಂದಿರವಿತ್ತು. ಅರಮನೆ, ಅಂತಃಪುರ, ನೃತ್ಯಶಾಲೆಗಳು ಅಲ್ಲಿದ್ದ ವಿವರಗಳು ದೊರೆಯುತ್ತವೆ. ಬನವಾಸಿಯ ಕೋಟೆಯೊಳಗೆ ದೊರಕಿದ ಮೃಗೇಶನ ಶಾಸನ ಒಂದು ಬೃಹದಾಕಾರದ ಕಲ್ಲಿನ ಕಂಬದ ಮೇಲೆ ಕೆತ್ತಲಾಗಿದ್ದು, ಅದರ ಬಳಿ ಒಂದು ದೊಡ್ಡ ಶಿವಲಿಂಗ ಕಂಡುಬಂದಿದ್ದು ಅಲ್ಲೊಂದು ದೊಡ್ಡ ಶಿವಾಲಯವಿತ್ತೆಂದು ಹೇಳಬಹುದು.

	ಬನವಾಸಿಯಲ್ಲಿ ವಾಸ್ತುನಿರ್ಮಾಣ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದಂತೆ ಮೂರ್ತಿಶಿಲ್ಪ ಪ್ರಗತಿಸಾಧಿಸಿತ್ತೆಂಬುದು ತಿಳಿದುಬರುತ್ತದೆ. ಮೂರ್ತಿಶಿಲ್ಪಗಳಲ್ಲಿ ಬಹುಶಃ ಪ್ರಾಚೀನತಮವಾದುದು ಈಗ ಮೈಸೂರು ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ವಿಭಾಗದ ವಸ್ತುಸಂಗ್ರಹಾಲಯದಲ್ಲಿರುವ ಸ್ಕಂಧ ಮೂರ್ತಿ. ಇದು ನಾಗಾರ್ಜುನ ಕೊಂಡದಲ್ಲಿ ದೊರಕಿರುವ ಕ್ರಿ.ಶ. 2ನೆಯ ಶತಮಾನದ ಶಿಲ್ಪಗಳನ್ನು ಹೋಲುವುದರಿಂದ ಮತ್ತು ಪದರಶಾಸ್ತ್ರದನ್ವಯ ಅದು ದೊರಕಿದ ಇಟ್ಟಿಗೆ ಕಟ್ಟಡದ ಕಾಲನಿರ್ಣಯದ ಆಧಾರದ ಮೇಲೆ ಅದನ್ನು ಆ ಕಾಲಕ್ಕೆ ನಿರ್ದೇಶಿಸಲಾಗಿದೆ. ಬನವಾಸಿಯ ಆಚಾರ್ಯದಮೋರಕನ (ಧರ್ಮರಕ್ಷಕ ?) ಶಿಷ್ಯ ನರ್ತಕ (ಣಟಕ) ನಿಂದ ಕಡೆಯಲಾದ 3ನೆಯ ಶತಮಾನಕ್ಕೆ ಸೇರುವ ಮಧು ಕೇಶ್ವರ ಮಂದಿರದಲ್ಲಿಟ್ಟಿರುವ ಐದುಹೆಡೆಯ ನಾಗಶಿಲ್ಪ ಮತ್ತೊಂದು ಗಮನಾರ್ಹ ಶಿಲ್ಪಕೃತಿ. ಅದರ ಎರಡು ಪಾಶ್ರ್ವಗಳಲ್ಲಿ ಕೆತ್ತಿರುವ ಬ್ರಾಹ್ಮೀಲಿಪಿಯ ಶಾಸನದ ಬರಹ ಸಹ ಮುದ್ದಾಗಿದ್ದು ಶಿಲ್ಪಕೃತಿಯನ್ನಬಹುದಾಗಿದೆ. ಅಲ್ಲಿ ದೊರಕಿರುವ ಹಲವಾರು ಶಿವಲಿಂಗಗಳು ಕುಕ್ಕುಟ ಅಂಡಾಕಾರವಾಗಿದ್ದು ಸೂಕ್ಷ್ಮವಾಗಿ ಚಿತ್ತ್ರಿಸಿದ ಬ್ರಹ್ಮಸೂತ್ರವನ್ನು ಹೊಂದಿವೆ. ಮಧುಕೇಶ್ವರಲಿಂಗ ನಿಜಕ್ಕೂ ಒಂದು ಮೋಹಕ ಶಿಲ್ಪಕೃತಿ. ಅದೇ ದೇವಾಲಯದಲ್ಲಿರುವ ಆದಿ ಮೂರ್ತಿ ಬಹಳ ಸುಂದರವಾದದ್ದು. ಅಲ್ಲಿರುವ ಕಾರ್ತಿಕೇಯ ಶಿಲ್ಪ ಇನ್ನೊಂದು ಉತ್ತಮ ಕೃತಿ. ದೇವಾಲಯದ ಕಂಬಗಳ ಮೇಲಿರುವ ಹಲವು ದೇವತೆಗಳ ಮತ್ತು ಪರಿವಾರದವರ ಶಿಲ್ಪಗಳು ಕಲ್ಯಾಣ ಚಾಲುಕ್ಯ-ಹೊಯ್ಸಳಶಿಲ್ಪ ಲಕ್ಷಣಗಳನ್ನು ಪ್ರಧಾನವಾಗಿ ಸೂಚಿಸುತ್ತವೆ. ವೀರಭದ್ರ, ನರಸಿಂಹ, ಗಣಪತಿ, ವೆಂಕಟರಮಣ, ಅಷ್ಟದಿಕ್ಪಾಲಕ ಮೂರ್ತಿಗಳು ವಿಜಯನಗರ ಕಾಲದ ಸುಂದರ ಶಿಲ್ಪಕೃತಿಗಳು. ಸೋದೆ ಅರಸರ ಕಾಲದ ಕೆತ್ತನೆಗಳಲ್ಲಿ ಕಲ್ಮಂಟಪ ಪಾತಾಳ, ಭೂ ಮತ್ತು ಸ್ವರ್ಗಗಳನ್ನು ಪ್ರತಿಬಿಂಬಿಸುವ ಸುಂದರ ಕೆತ್ತನೆಗಳನ್ನೊಳಗೊಂಡಿದ್ದು ಭೂಮಿಯನ್ನು ಹೊತ್ತುನಿಂತ ಆದಿಶೇಷ ಮತ್ತು ಅಷ್ಟದಿಗ್ಗಜಗಳ ನಿರೂಪಣೆ ಗಮನಾರ್ಹ. ಅದೇ ಕಾಲದ ಕಲ್ಮಂಚ ಸೂಕ್ಷ್ಮಕೇತ್ತನೆಗಳಿಂದ ಕೂಡಿದ್ದು ಆ ಕಾಲದ ಶಿಲಾ ಕೆತ್ತನೆಗಳಲ್ಲೇ ಉನ್ನತಕೃತಿಯಾಗಿದೆ. ಬನವಾಸಿಯಲ್ಲಿರುವ ಜೈನ ಮಂದಿರಗಳಲ್ಲಿ ಕೆಲವು ಕಂಚಿನ ವಿಗ್ರಹಗಳಿವೆ, ಅವುಗಳಲ್ಲಿ ಕಲ್ಯಾಣ ಚಾಳುಕ್ಯ ಕಾಲಕ್ಕೆ ಸೇರಬಹುದಾದ 8ನೆಯ ತೀರ್ಥಂಕರ ಚಂದ್ರಪ್ರಭ ಮೂರ್ತಿ ಸುಂದರ ಶಿಲ್ಪಕೃತಿ.

	ಇಲ್ಲಿಯ ದೇವಾಲಯದಲ್ಲಿ ಇತ್ತೀಚೆಗೆ ಪ್ರಾರಂಭಿಸಿದ ಶಿಲ್ಪ ಸಂಗ್ರಹ ಶಾಲೆಯಲ್ಲಿ ಕೆಲವು ಉತ್ತಮ ಶಿಲ್ಪಗಳನ್ನು ಪ್ರದರ್ಶಿಸಲಾಗಿದೆ. ಇಲ್ಲಿಯ ತಾರಾಭಗವತಿಯ ಭಿನ್ನವಾದ ತಲೆಯಲ್ಲಿ ಕರಂಡ ಮುಕುಟ, ಕರ್ಣಕುಂಡಲ, ಕಂಠಹಾರ ಮುಖದಲ್ಲಿರುವ ಆಕರ್ಷಕ ತೇಜಸ್ಸು ಕುಶಲ ಶಿಲ್ಪಿಯ ಕೈಚಳಕ ದ್ಯೋತಕಗಳಾಗಿವೆ. ಜೈನ ತೀರ್ಥಂಕರ, ಮಹಿಷಾಸುರ ಮರ್ದಿನಿ ಮುಂತಾದ ಶಿಲ್ಪಗಳೂ ಉತ್ತಮ ಕೃತಿಗಳಾಗಿವೆ.

	ಬನವಾಸಿಯಲ್ಲಿ 30ಕ್ಕೂ ಹೆಚ್ಚು ಶಾಸನಗಳು ದೊರಕಿವೆ. ಅವುಗಳಲ್ಲಿ ಬಹಳ ಪ್ರಾಚೀನವಾದ ವಾಸಿಷ್ಠೀಪುತ್ರಸಿವಸಿರಿ ಪುಳುಮಾವಿ ದೊರೆಯ ಮಹಾದೇವಿಯ ಸ್ಮಾರಕಶಾಸನ ವಿಶಿಷ್ಟವಾದದ್ದು. ಮಧುಕೇಶ್ವರ ಮಂದಿರದಲ್ಲಿ ನಿಲ್ಲಿಸಲಾದ ನಾಗಪ್ರತಿಮಾ ಶಾಸನ ಈ ಪ್ರದೇಶದಲ್ಲಿ ಬೌದ್ಧ ಧರ್ಮದ ಪ್ರಾಬಲ್ಯವನ್ನು ತಿಳಿಸುವುದಲ್ಲದೆ ಅಲ್ಲಿ ಆಳಿದ ಚುಟು ದೊರೆಗಳ ವಿಷಯವನ್ನು ತಿಳಿಸುತ್ತದೆ. ಬನವಾಸಿಯ ಉತ್ಖನನದಲ್ಲಿ ಕಂಡುಬಂದ ಮೃಗೇಶ ವರ್ಮನ ಒಡೆದ ಶಾಸನ ಇಲ್ಲಿ ಸಿಕ್ಕಿದ ಏಕಮಾತ್ರ ಕದಂಬ ಶಾಸನ. ಇದರಲ್ಲಿ ಸುಂದರವಾದ ಪೇಟೆಕಾಶಿರದ ಬ್ರಾಹ್ಮಿಲಿಪಿಯಲ್ಲಿ ತಳಗಿಂದ ಮೇಲಕ್ಕೆ ಬರೆಯಲಾಗಿದೆ ಗುಡ್ನಾಪುರದಲ್ಲಿ ಸಿಕ್ಕಿದ ಶಾಸನ ಇದೇ ಲಿಪಿ ಮತ್ತು ವಿಧಾನದಲ್ಲಿದ್ದು ಪೂರ್ಣವಾಗಿದ್ದು, ಕದಂಬರ ಇತಿಹಾಸ, ಆಗಿನ ಧಾರ್ಮಿಕ ಪರಿಸ್ಥಿತಿ, ಪ್ರಾಚೀನ ಬನವಾಸಿ ನಗರದ ಮತ್ತು ಪರಿಸರದ ಭೌಗೋಳಿಕ ಮಾಹಿತಿಗಳನ್ನೊದಗಿಸುತ್ತದೆ. ಚಾಳುಕ್ಯರಸರ ಕಾಲದ ಒಂದು ಗಮನಾರ್ಹ ವೀರಗಲ್ಲು ಕೋಟೆಯ ಹೊರಭಾಗದಲ್ಲಿ ಸಿಕ್ಕಿದೆ ಬಹಳ ಮಟ್ಟಿಗೆ ನಾಶವಾಗಿರುವ ಈ ಶಾಸನದಲ್ಲಿ ಚಾಳುಕ್ಯ ಸಾಮಂತ ಗೊಗ್ಗಿಯ ವಿಷಯವನ್ನು ಪ್ರಸ್ತಾವಿಸಲಾಗಿದೆ.

ಅದರೊಂದಿಗಿರುವ ಶಿಲ್ಪದಲ್ಲಿ ಎರಡು ಛತ್ರಗಳನ್ನು ಹಿಡಿದುರುವ ವೀರ ಅಥವಾ ರಾಜ ಪುರುಷನೊಬ್ಬನನ್ನು ಬಳಿಯಿರುವ ಕಂಬಕ್ಕೆ ಸರಪಳಿಯಿಂದ ಕಟ್ಟಲಾಗಿದೆ. ಮಧುಕೇಶ್ವರ ದೇವಾಲಯದ ಕಂಬದ ಮೇಲೆ ರಾಷ್ಟ್ರಕೂಟ, ಕಲ್ಯಾಣ ಚಾಳುಕ್ಯ, ವಿಜಯನಗರ ಮತ್ತು ಸೋದೆ ಅರಸರ ಹಲವಾರು ಶಾಸನಗಳು ದೇವಸ್ಥಾನದ ಜೀರ್ಣೊದ್ಧಾರ, ದಾನ ದತ್ತಿಗಳ ಬಗ್ಗೆ ತಿಳಿಸುತ್ತವೆ. ಅದೇ ದೇವಸ್ಥಾನದ ದೇವಕೋಷ್ಠದ ಮೇಲಿರುವ ವೀರಶೈವ ಶರಣನ ಬಗೆಗಿನ ಬರಹಗಳು ಗಮನಾರ್ಹ. ಇವಲ್ಲದೆ, ಕಂಚಿನ ವಿಗ್ರಹಗಳ ಮೇಲೆ, ಸಣ್ಣ ಶಿಲಾಫಲಕಗಳ ಮೇಲೆ ಹಲವಾರು ಶಾಸನಗಳು ದೊರಕಿದ್ದು ಬನವಾಸಿಯ ಇತಿಹಾಸದ ಮೇಲೆ ಬೆಳಕನ್ನು ಚಲ್ಲುತ್ತವೆ. ಕೆಲವು ತಾಮ್ರಶಾಸನಗಳೂ ಸಿಕ್ಕಿವೆ.

	ಬನವಾಸಿಯಲ್ಲಿ ಹಲವಾರು ನಾಣ್ಯಗಳು ಸಿಕ್ಕಿವೆ. ಅವುಗಳಲ್ಲಿ ಬಹಳ ಪ್ರಾಚೀನವಾದುವೆಂದರೆ ಮೌರ್ಯರ ಕಾಲದ್ದೆನ್ನಬಹುದಾದ ಮುದ್ರಾಕಿಂತ ನಾಣ್ಯಗಳು. ಹಲವು ಸಾತವಾಹನರ ನಾಣ್ಯಗಳೂ ಸಿಕ್ಕಿದ್ದರೂ ಬಹಳ ಸವೆದು ಹೋದದ್ದೆಯಿಂದ ಅವುಗಳಿಂದ ಅರಸರ ಬಗೆಗಿನ ವಿವರಗಳು ತಿಳಿದುಬರುವುದಿಲ್ಲ. ಚುಟು ದೊರೆಗಳಾದ ಶೀವಲಾನಂದ, ಮುಡಾನಂದ, ಚುಟುಕುಲಾನಂದರ ಹೆಸರಿರುವ ಸೀಸದ ನಾಣ್ಯಗಳು ದೊರಕಿವೆಯಲ್ಲದೆ ಇತರ ಸಾತವಾಹನ ಚುಟು ದೊರೆಗಳ ನಾಣ್ಯಗಳೂ ಸಿಕ್ಕಿವೆ.
(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ